Saturday, April 27, 2024

ಕಾಲಾಹರಣಬೇಡ







ಕಾಲಾಹರಣಬೇಡ 

                                                      ಕವನ್ರಾಗ್ 
ಸುಮ್ಮನೆ ಕೂತು
ಕಾಲಾಹರಣಬೇಡ
ಸಂತೆಯೊಳಗೆ ಬೆಲೆಯಿಲ್ಲದೆ
ಕಂತೆಗಳು ತೂಕಡಿಸುತ ಕೂತಂತೆ,
ಕಡಲಿನಾಳದಲಿ ಚಿಪ್ಪಿನೊಳ 
ಮುದುಡಿ ಅವಿತಿರುವ ಮುತ್ತಿನಂತೆ,
ಮುಂದೊಂದು ದಿನ ಅಂಧಕಾರದಲೇ 
ಮರೆಯಾಗಿಬಿಡುವೆ...
ಮನಸ್ಸು ಸೋತು ಹೋಗಲು ಕಾಯುತ್ತಿರದು
ವಯಸ್ಸು ಮುದುಡಿ ಕೂರಲು ಮುದಿಯಾಗದಿರದು
ಕಲ್ಪನೆ ಅಲ್ಪವಾಗುಳಿದಾಗ
ಕಲಾತ್ಮಕತೆ ಅಳಿದ್ಹೋಗುವುದು.......
ರೆಕ್ಕೆ ಬಲಿತ ಪಕ್ಷಿಯಂತೆ ಪಂಜರದಿಂದ್ಹೊರ ಬಾ
ಆಗಸದೆತ್ತರದಿ ಮಿನುಗುವ ತಾರೆಯಂತಾಗಲು ಬಾ
ಕಷ್ಟಕೋಟಲೆಗಳೊಳಗೆ 
ಕಠಿಣತೆಯಲಿ 
ಬಂಧಿಯಾಗಿ ಬರಿದಾದ ಬಾವಿಯೊಳಗಿನ 
ಕಪ್ಪೆಯಂತೆ....
ಸೊರಗಿ ಪಾಚಿಗಂಟಿ 
ಸೋತು ಕೊನೆಯಾಗದಿರು ಏನೂ ಇಲ್ಲದಂತೆ.
ಇಷ್ಟೇ ಪ್ರಪಂಚವೆಂದು
ಮೈಕೊಡವಿ ಎದ್ದೇಳು
ತೃಷೆಯಾರಿಸುವ ಉಷೆಯರಾಗ ಕೇಳಿಸುತ್ತಿದೆ!
ತಾಯಗರ್ಭದೊಳಗಿನಿಂದ 
ಹೊರಬಂದ ಕೂಸಂತ್ತಲ್ಲ,
ಕಾಲಗರ್ಭವ ಮೆಟ್ಟಿ ಹೊರ ಚಾಚಿದ ಬೆಳಕಂತೆ!!
ಕಪ್ಪು ಮೋಡದಿಂದ್ಹಿನಿಂದ ಹೊಮ್ಮುವ ಕಾಂತಿಯಂತೆ
ಹೊರಗೆ ಬಾ ನವಕಿರಣಗಳಂತೆ....!!!





No comments:

Post a Comment

ನಿಲ್ಲದ ಬದುಕು

  ಆಲೋಚನೆ ಯೋಚನೆಗಳಿಂದಲೇ ಆಚಾರ ವಿಚಾರಗಳ ಚಿಂತನೆಗಳಿಂದಲೇ ಮುಗಿಯದೀ ಬದುಕು... ಮುಂದುವರೆಯುತ್ತಲೇಯಿಹುದು. ನಿಖರತೆಯಿಲ್ಲದ ಸಂಬಂಧಗಳಿಂದಾಗಿ ನಿಲುಮೆಗಳಿಲ್ಲದ ಸಹವಾಸಗಳಿಂದ...